ಅಯ್ಯಪ್ಪ ಸ್ವಾಮಿಯ ಬಗ್ಗೆ

ಭಗವಾನ್ ಅಯ್ಯಪ್ಪನ ಜನನ ಮತ್ತು ಇತಿಹಾಸ

ಮಧುರೈ, ತಿರುನೆಲ್ವೇಲಿ ಮತ್ತು ರಾಮನಾಥಪುರವನ್ನು ವ್ಯಾಪಿಸಿಕೊಂಡಿದ್ದ ಪಾಂಡ್ಯ ಸಾಮ್ರಾಜ್ಯದ ಆಡಳಿತಗಾರ ತಿರುಮಲ ನಾಯ್ಕರಿಂದ ಉಚ್ಚಾಟನೆಗೊಂಡ ಪಾಂಡ್ಯ ರಾಜವಂಶದ ಸದಸ್ಯರು ವಳ್ಳಿಯೂರ್ ತೆಂಕಾಶಿ, ಚೆಂಗೋಟ್ಟ, ಅಚ್ಚಂ ಕೋವಿಲ್ ಮುಂತಾದೆಡೆಗಳಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಪ್ರಾಬಲ್ಯವನ್ನು ತಿರುವಾಂಕೂರಿನ ಕೆಲವು ಭಾಗಗಳಲ್ಲಿಯೂ ಸ್ಥಾಪಿಸಿದ್ದರು. ಅವರಲ್ಲಿ ಶಿವಗಿರಿಯ ಚೆಂಬಳನಾಟ್ಟು ಕೋವಿಲ್ನಲ್ಲಿದ್ದ ಕೆಲವರಿಗೆ ತಿರುವಾಂಕೂರಿನ ರಾಜನು ಪಂದಳ ರಾಜ್ಯವನ್ನು ಆಳುವ ಅವಕಾಶವನ್ನು ನೀಡಿದ್ದನು. 800 ವರ್ಷಗಳ ಹಿಂದೆ ಈ ರಾಜವಂಶದಲ್ಲಿ, ಅಯ್ಯಪ್ಪ ಸ್ವಾಮಿಯ ಸಾಕುತಂದೆ ಎನಿಸಿದ ರಾಜಶೇಖರನ್ ಎಂಬ ಅರಸು ರಾಜ್ಯವಾಳಿಕೊಂಡಿದ್ದನು. ನೀತಿವಂತನೂ ಧರ್ಮನಿಷ್ಠನೂ ಆದ ಅರಸನ  ಆಡಳಿತ ಕಾಲದಲ್ಲಿ ಪ್ರಜಾ ಜನರು ಸಂತುಷ್ಟರಾಗಿದ್ದರು. ಆ ಕಾಲವು ರಾಜ್ಯದ ಸುವರ್ಣ ಕಾಲಘಟ್ಟವೆನಿಸಿತ್ತು. ರಾಜ್ಯವು ಸುಭಿಕ್ಷೆಯಿಂದ ಕೂಡಿದ್ದರೂ ಒಂದು ದುಃಖ ಮಾತ್ರ ರಾಜನನ್ನು ಸದಾ ಕಾಡುತ್ತಿತ್ತು. ಆ ರಾಜನಿಗೆ ಸಂತಾನ ಸೌಭಾಗ್ಯ ಪ್ರಾಪ್ತವಾಗಿರಲಿಲ್ಲ. ರಾಜ್ಯಾಧಿಕಾರವನ್ನು ಮುಂದೆ ವಹಿಸಿಕೊಳ್ಳಲು ಉತ್ತರಾಧಿಕಾರಿ ಇಲ್ಲವೆಂದು ರಾಜನೂ ರಾಣಿಯೂ ನಿಸ್ಸಹಾಯಕರಾಗಿ ಭಗವಾನ್ ಶಿವನಲ್ಲಿ ಮಗುವನ್ನು ಕರುಣಿಸಬೇಕೆಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದರು.

ಮಹಿಷಾಸುರನೆಂಬ ಅಸುರರಾಜನು ಕಠಿಣ ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಭೂಮಿಯಲ್ಲಿ ಯಾರಿಗೂ ತನ್ನನ್ನು ವಧಿಸಲು ಸಾಧ್ಯವಾಗಬಾರದು ಎಂಬ ವರವನ್ನು ಪಡೆದನು. ಬ್ರಹ್ಮನ ವರಬಲದಿಂದ ದುರಹಂಕಾರಿಯಾದ ಮಹಿಷಾಸುರನು ಜನರ ತಂಡ ತಂಡಗಳನ್ನೇ ಕೊಲ್ಲುತ್ತಾ, ಪಟ್ಟಣಗಳನ್ನೂ ಜನವಾಸ ಕೇಂದ್ರಗಳನ್ನೂ ನಾಶ ಮಾಡಿದನು. ಭಯಭೀತರಾದ ಜನರು ಪರರಾಜ್ಯಗಳಿಗೆ ಪಲಾಯನಗೈದರು. ಅಮಾನುಷಿಕ ಶಕ್ತಿವಂತರಿಗೆ ಮಾತ್ರವೇ ಮಹಿಷಾಸುರನನ್ನು ನಿರ್ನಾಮಗೊಳಿಸಲು ಸಾಧ್ಯ ಎಂಬುದನ್ನು ತಿಳಿದುಕೊಂಡ ದೇವತೆಗಳು ದುರ್ಗಾದೇವಿಯನ್ನು ಮೊರೆಹೋದರು. ಅವಳಿಂದ ಅಭಯವನ್ನೂ ಪಡೆದರು. ದೇವಿಗೂ ಮಹಿಷಾಸುರನಿಗೂ ನಡೆದ ಯುದ್ಧದಲ್ಲಿ ನೆತ್ತರಿನ ಹೊಳೆ ಹರಿಯಿತು. ಯುದ್ಧದ ಕೊನೆಯಲ್ಲಿ ಮಹಿಷಾಸುರನು ದೇವಿಯಿಂದ ಹತನಾದನು.

ಮಹಿಷಾಸುರನ ಸೋದರಿಯಾದ ಮಹಿಷಿಯು ತನ್ನ ಸಹೋದರನ ಕೊಲೆಗೆ ಪ್ರತಿಕಾರ ಮಾಡಲು ನಿರ್ಧರಿಸಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ವಿಷ್ಣು(ಹರಿ) ಮತ್ತು ಶಿವ(ಹರ) ಇವರಿಗೆ ಜನಿಸುವ ಸಂತಾನಕ್ಕೆ ಮಾತ್ರವಲ್ಲದೆ ಬೇರಾರಿಂದಲೂ ತನ್ನನ್ನು ಕೊಲ್ಲಲು ಸಾಧ್ಯವಾಗಬಾರದು ಎಂಬ ವರವನ್ನು ಬ್ರಹ್ಮನಿಂದ ಪಡೆದುಕೊಂಡಳು. ಕೂಡಲೇ ದೇವಲೋಕಕ್ಕೆ ಧಾವಿಸಿದ ಮಹಿಷಿಯು ದೇವತೆಗಳನ್ನು ಪೀಡಿಸಲು ಆರಂಭಿಸಿದಳು. ದಿಕ್ಕು ತೋಚದ ದೇವತೆಗಳು ವಿಷ್ಣುವನ್ನು ಮೊರೆಹೊಕ್ಕರು. ಮಹಿಷಿ ಪಡೆದ ವರವನ್ನು ಅರ್ಥೈಸಿಕೊಂಡ ವಿಷ್ಣು ಹಿಂದೆ ಅಸುರರಿಂದ ಅಮೃತವನ್ನು ಅಪಹರಿಸಿ ದೇವತೆಗಳಿಗೆ ನೀಡುವುದಕ್ಕಾಗಿ ತಾನು ತಾಳಿದ್ದ ಮೋಹಿನಿಯ ರೂಪವನ್ನು ಈಗ ಮತ್ತೊಮ್ಮೆ ತಾಳಿದನು. ಮೋಹಿನಿಯಾಗಿ ಶಿವನೊಂದಿಗೆ ಕೂಡಿ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟನು. ಆ ಮಗುವನ್ನು ಸಂತಾನವಿಲ್ಲದೆ ದುಃಖಿತನಾಗಿದ್ದ, ಶಿವಭಕ್ತನೂ ಆದ, ಪಂದಳ ರಾಜನ ಸಂರಕ್ಷಣೆಯಲ್ಲಿ ಬೆಳೆಸಲು ತೀರ್ಮಾನಿಸಿದನು.
ಒಮ್ಮೆ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡುವ ಸಲುವಾಗಿ ಹೋದ ಪಂದಳ ರಾಜನು ಪ್ರಾಕೃತಿಕ ಸೌಂದರ್ಯ ಮತ್ತು ಜಲಪಾತಗಳ ಮನೋಹರತೆಯಲ್ಲಿ ಮುಳುಗಿ ಹೋದನು. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ಶಿಶುವಿನ ಅಳಲು ಕೇಳಿಬಂತು. ಅಚ್ಚರಿಗೊಂಡ ರಾಜನು ಆ ದನಿಯನ್ನು ಹಿಂಬಾಲಿಸಿ ಹೋದನು. ಅಲ್ಲಿ ಅರಸನು ಕೈಕಾಲು ಅಲ್ಲಾಡಿಸುತ್ತಿರುವ ಒಂದು ಮುದ್ದು ಮಗುವನ್ನು ಕಂಡನು. ಕೌತುಕದಿಂದ ಆ ಮಗುವನ್ನು ನೆಟ್ಟ ನೋಟದಿಂದ ನೋಡುತ್ತಿದ್ದ ರಾಜನ ಮುಂದೆ ಸನ್ಯಾಸಿಯೊಬ್ಬ ಪ್ರತ್ಯಕ್ಷನಾಗಿ ಆ ಶಿಶುವನ್ನು ಅರಮನೆಗೆ ಒಯ್ಯುವಂತೆ ಸೂಚಿಸಿದನು. ಆ ಮಗುವಿನ ಸಾನ್ನಿಧ್ಯದಿಂದ ರಾಜವಂಶದ ಮೇಲಿರುವ ಕರಿ ನೆರಳು ದೂರವಾಗುವುದೆಂದೂ ಹನ್ನೆರಡು ವರ್ಷ ಪ್ರಾಯ ಪೂರ್ತಿಯಾದಾಗ ಮಗುವಿನ ದಿವ್ಯತ್ವ ಪ್ರಕಟವಾಗುವುದೆಂದೂ ಹೇಳಿ ಸನ್ಯಾಸಿ ರಾಜನನ್ನು ಎಚ್ಚರಿಸಿದನು. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕಂಡ ಸನ್ಯಾಸಿ ಅವನಿಗೆ  ಮಣಿಕಂಠನೆಂದು ನಾಮಕರಣ ಮಾಡಲು ಸೂಚಿಸಿದನು. ರಾಜನು ಹರ್ಷೋನ್ಮಾದದೊಂದಿಗೆ ಮಗುವನ್ನು ಅರಮನೆಗೆ ಕೊಂಡು ಹೋಗಿ ಮಹಾರಾಣಿಗೆ ನಡೆದ ಎಲ್ಲ ವಿಷಯಗಳನ್ನೂ ತಿಳಿಸಿದನು. ಶಿವನ ಅನುಗ್ರಹದಿಂದಲೇ ಇವೆಲ್ಲಾ ಸಂಭವಿಸಿದುವೆಂದು ಅವರಿಬ್ಬರೂ ನಂಬಿದರು. ರಾಜಶೇಖರನ ಅನಂತರ ಅರಸಾಗಲು ಆಸೆ ಪಟ್ಟಿದ್ದ ದಿವಾನನ ಹೊರತಾಗಿ ಎಲ್ಲರೂ ರಾಜ ದಂಪತಿಯ ಸಂತಸದಲ್ಲಿ ಪಾಲ್ಗೊಂಡರು.

ರಾಜಶೇಖರನು ಮಗುವಿಗೆ ಕಾಲಕಾಲಕ್ಕೆ ಬೇಕಾದ ಸಂಸ್ಕಾರಗಳನ್ನು ಮಾಡಿದನು. ಮಗುವಾಗಿದ್ದೂ ಮಣಿಕಂಠನು ಬುದ್ಧಿವಂತನೂ ಪರಿಪಕ್ವಮತಿಯೂ ಆಗಿದ್ದನು. ಯುದ್ಧ ವಿದ್ಯೆಯಲ್ಲಿಯೂ ಶಾಸ್ತ್ರಗಳಲ್ಲಿಯೂ ತನ್ನ ಪ್ರೌಢಿಮೆಯನ್ನು ಪ್ರಕಟಿಸಿದನು. ಮಣಿಕಂಠನು ತನ್ನ ಬುದ್ಧಿಶಕ್ತಿಯಿಂದಲೂ ಅಮಾನುಷಿಕ ಪ್ರತಿಭೆಯಿಂದಲೂ ಗುರುವನ್ನು ಚಕಿತಗೊಳಿಸಿದನು. ಪಂದಳ ರಾಜ್ಯದಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿ ತುಳುಕಿತು. ಮಣಿಕಂಠನದ್ದು ಕೇವಲ ನಶ್ವರವಾದ ಮನುಷ್ಯ ಜನ್ಮ ಅಲ್ಲವೆಂದೂ ಅವನಲ್ಲಿ ದೈವಿಕ ಚೈತನ್ಯ ತುಂಬಿದೆಯೆಂದೂ ಆತನ ಗುರು ತೀರ್ಮಾನಿಸಿದನು. ಕಲಿಕೆ ಪೂರ್ತಿಗೊಳಿಸಿದ ಮಣಿಕಂಠನು ಯಥೋಚಿತ ಗುರುದಕ್ಷಿಣೆ ಕೊಡಲು ಮತ್ತು ಗುರುವಿನ ಅನುಗ್ರಹ ಪಡೆಯಲು ಹೊರಟನು. ಅಮಾನುಷಿಕ ಪ್ರಭಾವವಿರುವವ ಹಾಗೂ ದಿವ್ಯಶಕ್ತಿ ಸಂಪನ್ನನಾದವ ರಾಜಕುಮಾರನೆಂದು ತಿಳಿದ ಗುರು ತನ್ನ ಆಶೀರ್ವಾದವನ್ನು ಅಪೇಕ್ಷಿಸಿ ಬಂದ ಮಣಿಕಂಠನಿಗೆ ಹೇಳಿದನು : ‘‘ಕುರುಡನೂ ಕಿವುಡನೂ ಆದ ನನ್ನ ಮಗನಿಗೆ ದೃಷ್ಟಿಯನ್ನೂ ಮಾತಾಡುವ ಶಕ್ತಿಯನ್ನೂ ನೀಡಿ ಅನುಗ್ರಹಿಸು.’’ ಈ ವಿಜ್ಞಾಪನೆಯನ್ನು ಮನ್ನಿಸಿದ ಮಣಿಕಂಠನು ಗುರುಪುತ್ರನ ಶಿರಸ್ಸಿನ ಮೇಲೆ ಕೈಯಿಟ್ಟನು. ಕೂಡಲೇ ಅವನಿಗೆ ದೃಷ್ಟಿ ಮತ್ತು ಮಾತಾಡುವ ಸಾಮರ್ಥ್ಯ ಪ್ರಾಪ್ತವಾದುವು. ತಾನುಮಾಡಿದ ಅದ್ಭುತ ಕೆಲಸವನ್ನು ಯಾರಿಗೂ ತಿಳಿಸಬಾರದೆಂದು ಕೇಳಿಕೊಂಡು ಮಣಿಕಂಠನು ಅರಮನೆಗೆ ಹಿಂದಿರುಗಿದನು.

ಈ ನಡುವೆ ರಾಣಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆ ಮಗುವಿಗೆ ರಾಜ ರಾಜನ್ ಎಂದು ನಾಮಕರಣ ಮಾಡಿದ್ದರು. ರಾಜ್ಯದಲ್ಲಿ ನಡೆದು ಹೋದ ಅದ್ಭುತ ಘಟನಾವಳಿಗಳು ರಾಜಶೇಖರನನ್ನು ಚಿಂತಿಸುವಂತೆ ಮಾಡಿದ್ದುವು. ಭಗವಾನ್ ಅಯ್ಯಪ್ಪನೇ ತನ್ನ ಮಗನಾಗಿ ಬಂದಿರುವನೆಂದು ಅವನು ಭಾವಿಸಿದನು. ಮಣಿಕಂಠನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿದನು. ದಿವಾನನ ಹೊರತಾಗಿ ಆಸ್ಥಾನದಲ್ಲಿರುವವರೆಲ್ಲರೂ ಸಂತೋಷಪಟ್ಟರು. ತನ್ನ ಮಹತ್ವಾಕಾಂಕ್ಷೆಯನ್ನು ರಹಸ್ಯವಾಗಿ ಪೋಷಿಸಿದ್ದ ಕುತಂತ್ರಿಯಾದ ಮಂತ್ರಿಯು ಮಣಿಕಂಠನನ್ನು ದ್ವೇಷಿಸುತ್ತಿದ್ದನು. ಅವನು ಈ ದೈವಿಕ ಅವತಾರವನ್ನು ನಿರ್ನಾಮಗೊಳಿಸಲು ಕಟಿಬದ್ಧನಾದನು. ವಿಷ ಪ್ರಾಶನವೇ ಮೊದಲಾದ ಹಲವಾರು ತಂತ್ರಗಳನ್ನು ಕೈಗೊಂಡನು. ಮಣಿಕಂಠನಿಗಾದ ಚಿಕ್ಕ ಚಿಕ್ಕ ತೊಂದರೆಗಳನ್ನು ಭಗವಾನ್ ಶಿವನೇ ದೂರೀಕರಿಸಿದನು. ಮಂತ್ರಿಯ ಕುಯುಕ್ತಿಗಳೆಲ್ಲ ವಿಫಲಗೊಂಡುವು.

ತನ್ನ ಯೋಜನೆಗಳು ಭಂಗವಾಗುವುದನ್ನು ಕಂಡು ನಿರಾಶನಾಗಿ ಹೋದ ದಿವಾನನು ರಾಣಿಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸತೊಡಗಿದನು. ಸ್ವಂತ ಮಗನು ಜೀವಿಸಿರುವಾಗಲೇ ಮಣಿಕಂಠನನ್ನು ರಾಜನನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಅವಳಿಗೆ ಬೋಧಿಸಿದನು. ಅರ್ಥಶಾಸ್ತ್ರದ ಪ್ರಕಾರ ಗುರಿಯು ಮಾರ್ಗವನ್ನು ಉದಾತ್ತಗೊಳಿಸುತ್ತದೆ ಎಂಬಂತೆ ಅನಾರೋಗ್ಯವನ್ನು ಅಭಿನಯಿಸಲು ರಾಣಿಗೆ ಸಲಹೆ ನೀಡಿದನು. ಆತನ ವಿಶ್ವಾಸದ ವೈದ್ಯನೊಬ್ಬನಿಂದ ರಾಣಿಯ ಅನಾರೋಗ್ಯ ನಿವಾರಣೆಗೆ ಹುಲಿಯ ಹಾಲು ಬೇಕು ಎಂದು ಹೇಳಿಸಿದನು. ಹುಲಿಯ ಹಾಲನ್ನು ಹುಡುಕಲು ಹೊರಟ ಮಣಿಕಂಠನನ್ನು ನರಭಕ್ಷಕರಿಗೆ ಆಹಾರವನ್ನಾಗಿಸುವುದು ಅವನ ಉದ್ದೇಶ. ಜವಾಬ್ದಾರಿ ನೆರವೇರಿಸಲು ಸಾಧ್ಯವಾಗದೆ ಪರಾಜಿತನಾಗಿ ಮಣಿಕಂಠನು ಹಿಂತಿರುಗಿ ಬಂದಲ್ಲಿ ಸಹಜವಾಗಿಯೇ ಆತನ ಮೇಲಿರುವ ರಾಜನ ಪ್ರೀತಿ ಕಡಿಮೆಯಾಗುವುದು ಎಂದು ರಾಣಿಗೆ ಹೇಳಿದನು.

ಪುತ್ರ ಸ್ನೇಹದಿಂದ ಕುರುಡಿಯಾದ ರಾಣಿ ದಿವಾನನ ಮಾತುಗಳನ್ನು ನಂಬಿದಳು. ಆತನು ಸೂಚಿಸಿದಂತೆ, ಸಹಿಸಲು ಅಸಾಧ್ಯವೆನಿಸಿದ ತಲೆನೋವಿನಿಂದ ಬಳಲುತ್ತಿರುವುದಾಗಿ ರಾಜನನ್ನು ನಂಬಿಸಿದಳು. ಭ್ರಮೆಗೊಳಗಾದ ರಾಜನು ಅರಮನೆಯ ವೈದ್ಯನನ್ನು ಕರೆಸಿದನು. ಎಷ್ಟು ಕಷ್ಟಪಟ್ಟರೂ ರಾಣಿಯ ಕಾಯಿಲೆ ಯಾವುದೆಂದು ತಿಳಿದುಕೊಳ್ಳಲು ಅರಮನೆಯ ವೈದ್ಯನಿಂದ ಸಾಧ್ಯವಾಗಲಿಲ್ಲ. ಈ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ದಿವಾನನು ತಾನು ಏರ್ಪಾಡು ಮಾಡಿದ ವೈದ್ಯನನ್ನು ಕರೆಸಿದನು. ರಾಣಿಯನ್ನು ಪರೀಕ್ಷಿಸಿದಂತೆ ನಟಿಸಿದ ಆ ವೈದ್ಯನು ಈಂದ ಹುಲಿಯ ಹಾಲಿನಿಂದ ಮಾತ್ರವೇ ರಾಣಿಯ ರೋಗ ಶಮನಗೊಳ್ಳುವುದೆಂದು ಸೂಚಿಸಿದನು. ರಾಣಿಯ ಕಾಯಿಲೆಯನ್ನು ಗುಣಪಡಿಸಿದವರಿಗೆ ಅರ್ಧರಾಜ್ಯವನ್ನೇ ಕೊಡುವುದಾಗಿ ರಾಜನು ಡಂಗುರ ಸಾರಿಸಿದನು. ಹುಲಿಯ ಹಾಲು ಸಂಗ್ರಹಿಸುವ  ಸಲುವಾಗಿ ಕಾಡಿಗೆ ಹೋದ ಸೈನಿಕರು ಬರಿಗೈಯಲ್ಲಿ ಹಿಂತಿರುಗಿದರು.

ಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದರೂ ಆತನ ಕಿರುಹರಯವನ್ನು ಮತ್ತು ಮುಂದೆ ನಡೆಯಲಿರುವ ಆತನ ಕಿರೀಟಧಾರಣೆಯನ್ನು ಎತ್ತಿ ತೋರಿಸಿದ ರಾಜಶೇಖರನು ಅವನಿಗೆ ಒಪ್ಪಿಗೆ ನೀಡಲಿಲ್ಲ. ಕುಟುಂಬಕ್ಕಾಗಿ ಒಂದು ಉಪಕಾರವನ್ನು ಮಾಡಲು ತನಗೆ ಒಪ್ಪಿಗೆಯನ್ನು ನೀಡಬೇಕೆಂದು ಮಣಿಕಂಠನು ತಂದೆಯನ್ನು ಒತ್ತಾಯಿಸಿದನು. ಜವಾಬ್ದಾರಿಯುತನಾದ ತಂದೆ ಎಂಬ ನೆಲೆಯಲ್ಲಿ ಮಗನ ಅಪೇಕ್ಷೆಯನ್ನು ಕಡೆಗಣಿಸಿದರೂ ಸನ್ನಿವೇಶದ ಒತ್ತಡದಿಂದಾಗಿ ಹುಲಿಯ ಹಾಲು ತರುವ ಸಲುವಾಗಿ ಕಾಡಿಗೆ ತೆರಳಲು ಮಗನಿಗೆ ಒಪ್ಪಿಗೆ ನೀಡಬೇಕಾಗಿ ಬಂತು. ಮಣಿಕಂಠನ ನೆರವಿಗಾಗಿ ಸಾಹಸಿಗಳಾದ ಭಟರ ಒಂದು ತಂಡವನ್ನು ಅವನೊಂದಿಗೆ ಕಾಡಿಗೆ ಕಳಿಸಲು ಅರಸನು ತೀರ್ಮಾನಿಸಿದನು. ಆದರೆ ಜನರ ಗುಂಪುಗಳನ್ನು ಕಂಡೊಡನೆ ಹುಲಿಯು ಓಡಿ ಹೋಗುವುದೆಂಬ ಕಾರಣದಿಂದ ಮಣಿಕಂಠನು ತಂದೆಯ ತೀರ್ಮಾನವನ್ನು ಒಪ್ಪಲಿಲ್ಲ. ಕೊನೆಗೆ ವಾತ್ಸಲ್ಯಮಯಿಯಾದ ತಂದೆಯು ಆಹಾರ ಸಾಮಗ್ರಿಗಳನ್ನೂ ಶಿವಭಕ್ತಿಯ ಸೂಚಕವಾದ ಹಾಗೂ ಮೂರು ಕಣ್ಣುಗಳಿರುವ ತೆಂಗಿನಕಾಯಿಯನ್ನೂ ಇತ್ತು ಮಗನನ್ನು ಕಳಿಸಿಕೊಟ್ಟನು.

ಮಣಿಕಂಠನು ಅರಣ್ಯವನ್ನು ಪ್ರವೇಶಿಸಿದಾಗ ಭಗವಾನ್ ಶಿವನ ಪಂಚಭೂತಗಣಗಳೂ ಒಟ್ಟಿಗೆ ಸೇರಿಕೊಂಡವು. ಪಯಣದ ನಡುವೆ ದೇವಲೋಕದಲ್ಲಿ ಮಹಿಷಿಯು ನಡೆಸುತ್ತಿರುವ ಅನ್ಯಾಯಗಳೆಲ್ಲ ಮಣಿಕಂಠನ ಗಮನಕ್ಕೆ ಬಂದುವು. ಅವನಲ್ಲಿರುವ ನ್ಯಾಯದ ಪ್ರಜ್ಞೆ ಜಾಗೃತವಾಯಿತು. ಅವನು ಮಹಿಷಿಯನ್ನು ಹಿಡಿದೆಳೆದು ಭೂಲೋಕಕ್ಕೆ ಎಸೆದನು. ಅವಳು ಅಯುತಾ ನದಿಯ ದಂಡೆಗೆ ಬಂದು ಬಿದ್ದಳು. ಇಬ್ಬರ ನಡುವೆ ಘೋರವಾದ ಯುದ್ಧ ನಡೆಯಿತು. ಕೊನೆಗೆ ಮಣಿಕಂಠನು ಮಹಿಷಿಯ ಎದೆಯನ್ನೇರಿ ತಾಂಡವ ನೃತ್ಯಗೈದನು. ಅದರ ಪ್ರತಿಧ್ವನಿ ಭೂಮಿಯಲ್ಲೂ ಸ್ವರ್ಗದಲ್ಲೂ ವ್ಯಾಪಿಸಿತು. ದೇವತೆಗಳೂ ಭಯ ಚಕಿತರಾದರು. ತನ್ನ ಮೇಲೆ ನೃತ್ಯ ಮಾಡುವುದು ಹರಿಹರಸುತನಾದ ಪುಣ್ಯ ಪುರುಷನೆಂಬುದನ್ನು ಮಹಿಷಿ ಅರಿತುಕೊಂಡಳು. ಆ ಚಿಕ್ಕ ಬಾಲಕನಿಗೆ ನಮಸ್ಕರಿಸಿ ಮರಣಕ್ಕೆ ಶರಣಾದಳು.

ಭಗವಾನ್ ಶಿವನೂ ಮಹಾವಿಷ್ಣುವೂ ಕಾಳಕೆಟ್ಟಿಯ ಶಿಖರದಿಂದ ಮಣಿಕಂಠನ ನೃತ್ಯವನ್ನು ಕಂಡಿದ್ದರು. (ಕವಲನ್ ಎಂಬ ಕರಂಬನ ಮಗಳಾದ ಲೀಲ ಎಂಬಾಕೆ ಮಹಿಷಿಯಾಗಿ ಹುಟ್ಟಿಬಂದಿದ್ದಳು. ಶ್ರೀ ಧರ್ಮಶಾಸ್ತಾವಿನ ಅನುಗ್ರಹದಿಂದ ಅವಳು ಶಾಪದಿಂದ ಮೋಕ್ಷ ಪಡೆದು ಮಾಣಿಕಪ್ಪುರತ್ತಮ್ಮೆಯಾದಳೆಂದು ಐತಿಹ್ಯವಿದೆ. ಆ ಹೆಸರಿನಲ್ಲಿ ಅವಳಿಗೆ ಒಂದು ದೇವಾಲಯವನ್ನೂ ನಿರ್ಮಿಸಲಾಗಿದೆ.)

ಮಹಿಷಿಯ ನಿಗ್ರಹದ ಬಳಿಕ ಮಣಿಕಂಠನು ಹುಲಿಯ ಹಾಲನ್ನು ಸಂಗ್ರಹಿಸುವ ಸಲುವಾಗಿ ಅರಣ್ಯವನ್ನು ಪ್ರವೇಶಿಸಿದನು. ಅಲ್ಲಿ ಭಗವಾನ್ ಶಿವನು ಅವನಿಗೆ ದರ್ಶನ ನೀಡಿದನು. ಆತನು ಮಣಿಕಂಠನ ಪ್ರಧಾನವಾದ ಒಂದು ಜವಾಬ್ದಾರಿ ಪೂರ್ತಿಗೊಂಡದ್ದಾಗಿ ಹೇಳಿದನು. ಇನ್ನೊಂದು ಕರ್ತವ್ಯ ಬಾಕಿ ಇದೆ ಎಂದೂ ತಿಳಿಸಿದನು. ಮಣಿಕಂಠನ ವ್ಯಾಕುಲಗೊಂಡ ತಂದೆಯ ಕುರಿತೂ ರೋಗಪೀಡಿತಳಾದ ತಾಯಿಯ ಕುರಿತೂ ನೆನಪಿಸಿದನು. ಅಮೂಲ್ಯವಾದ ಹುಲಿಯ ಹಾಲನ್ನು ಸಂಗ್ರಹಿಸಲು ದೇವೇಂದ್ರನ ಸಹಾಯವನ್ನು ಕೋರುವುದಾಗಿಯೂ ಮಾತು ಕೊಟ್ಟನು. ದೇವೇಂದ್ರನು ಹುಲಿಯ ರೂಪ ತಾಳಿ ಮಣಿಕಂಠನೊಡನೆ ಅರಮನೆಯತ್ತ ಹೊರಟನು. ಉಳಿದ ದೇವತೆಗಳು ಗಂಡು ಹುಲಿಗಳಾಗಿ ದೇವಿಯರು ಹೆಣ್ಣು ಹುಲಿಗಳಾಗಿ ಅವರನ್ನು ಹಿಂಬಾಲಿಸಿದರು. ಮರಿಹುಲಿಯೂ ಇತರ ದೊಡ್ಡ ಹುಲಿಗಳ ತಂಡವೂ ಬರುತ್ತಿರುವುದನ್ನು ಕಂಡು ಹೆದರಿದ ಪಂದಳದ ಜನರು ಓಡಿ ಹೋಗಿ ಮನೆಗಳಲ್ಲಿ ಅವಿತರು. ಆಶ್ಚರ್ಯಚಕಿತನಾದ ರಾಜನ ಮುಂದೆ ಹಿಂದೆ ಕಾಡಿನಲ್ಲಿ ಭೇಟಿಯಾಗಿದ್ದ ಸನ್ಯಾಸಿಯು ಫಕ್ಕನೆ ಪ್ರತ್ಯಕ್ಷನಾಗಿ ಮಣಿಕಂಠನ ದೈವತ್ವದ ರಹಸ್ಯವನ್ನು ಸ್ಪಷ್ಟಪಡಿಸಿದನು. ಮಣಿಕಂಠನು ಹುಲಿಗಳೊಂದಿಗೆ ಅರಮನೆಯ ಪ್ರವೇಶ ದ್ವಾರಕ್ಕೆ ಹತ್ತಿರವಾಗಲು ರಾಜನಲ್ಲಿ ಮೌನ ಹಾಗೂ ವಿಷಾದಭಾವ ತುಂಬಿತು. ಹುಲಿಂು ಬೆನ್ನಿನ ಮೇಲಿಂದ ಕೆಳಗಿಳಿದ ಬಾಲಕನು ಚಕ್ರವರ್ತಿಯೊಂದಿಗೆ ಹೇಳಿದನು ‘‘ಮರಿ ಹಾಕಿದ ಹುಲಿಯನ್ನು ತಂದಿದ್ದೇನೆ. ಇನ್ನು ಆದಷ್ಟು ಬೇಗನೆ ಹಾಲು ಸಂಗ್ರಹಿಸಿ ತಾಯಿಯ ಅದ್ಭುತ ರೋಗವನ್ನು ದೂರೀಕರಿಸುವ’’. ರಾಜನು ಹೆಚ್ಚು ಹೊತ್ತು ತಡೆಯಲಾರದೆ ಬಾಲಕನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಕೊನೆಗೆ, ರಾಣಿಯ ಕಪಟ ನಾಟಕದ ರಹಸ್ಯ ಬಯಲಾದ ಆ ನಿಮಿಷದಲ್ಲಿ ಮಣಿಕಂಠನು ಅರಣ್ಯದತ್ತ ತೆರಳಿದನು. ಕಾಡಿನಿಂದ ಹಿಂತಿರುಗಿ ಬರುವಾಗ ಅವನಿಗೆ ಹನ್ನೆರಡು ವರ್ಷ ಪ್ರಾಯವಾಗಿತ್ತು. ತನ್ನ ಮಗನು ನಾಡನ್ನು ಬಿಟ್ಟು ಕಾಡಿಗೆ ತೆರಳಲು ಕಾರಣನಾದ ದಿವಾನನನ್ನು ದಂಡಿಸಬೇಕೆಂದು ಅರಸನು ತೀರ್ಮಾನಿಸಿದನು. ಆದರೆ, ಎಲ್ಲವೂ ದೈವೇಚ್ಛೆಯಂತೆ ನಡೆಯುವುದೆಂದೂ ಸಂಯಮವನ್ನು ಪಾಲಿಸಬೇಕೆಂದೂ ಮಣಿಕಂಠನು ಸಲಹೆ ನೀಡಿದನು. ತನ್ನ ಅವತಾರದ ಉದ್ದೇಶವನ್ನು ಪೂರ್ತಿಗೊಳಿಸಿದ್ದರಿಂದ ತಾನು ದೇವಲೋಕಕ್ಕೆ ಹಿಂತಿರುಗುವುದಾಗಿಯೂ ತಂದೆಗೆ ಸೂಚಿಸಿದನು. ತನ್ನಲ್ಲಿ ತೋರಿದ ಭಕ್ತಿ ವಿಶ್ವಾಸಗಳ ಬಗ್ಗೆ ತಾನು ಸಂತುಷ್ಟನೆಂದೂ ಅದಕ್ಕಿರುವ ಪ್ರತಿಫಲ ಎಂಬ ನೆಲೆಯಲ್ಲಿ ರಾಜನಿಗೆ ಆತನು ಬಯಸಿದ ಒಂದು ವರವನ್ನು ಈಯಲು ಸಿದ್ಧನಾಗಿರುವುದಾಗಿಯೂ ತಿಳಿಸಿದನು. ಮಣಿಕಂಠನ ಸ್ಮರಣೆಗಾಗಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂಬ ಅಭಿಲಾಷೆ ಇದೆಯೆಂದೂ ಅದಕ್ಕೆತಕ್ಕುದಾದ ಜಾಗವನ್ನು ತೋರಿಸಿಕೊಡಬೇಕೆಂದೂ ಆ ಕ್ಷಣದಲ್ಲಿ ರಾಜಶೇಖರನು ತನ್ನ ಅಪೇಕ್ಷೆಯನ್ನು ಮುಂದಿಟ್ಟನು. ಕೂಡಲೇ ಮಣಿಕಂಠನು ಒಂದು ಶರವನ್ನು ತೆಗೆದು ದೂರಕ್ಕೆ ಎಸೆದನು. ಆ ಶರವು ಶ್ರೀರಾಮನ ಕಾಲದಲ್ಲಿ ಶಬರಿ ಎಂದು ಖ್ಯಾತಳಾದ ಸನ್ಯಾಸಿನಿ ತಪಸ್ಸನ್ನಾಚರಿಸಿದ್ದ ಶಬರಿ ಎಂಬ ಸ್ಥಳದಲ್ಲಿ ಹೋಗಿ ನಾಟಿತು. ಆ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ಸೂಚಿಸಿದ ಬಳಿಕ ಮಣಿಕಂಠನು ಅಪ್ರತ್ಯಕ್ಷನಾದನು.

ಅಗಸ್ತ್ಯ ಸ್ವಾಮಿಯ ಸಲಹೆಯಂತೆ ರಾಜಶೇಖರನು ಶಬರಿಮಲೆಯಲ್ಲಿ ದೇವಾಲಯ ಕಟ್ಟಡಕ್ಕಿರುವ ಶಂಕುಸ್ಥಾಪನೆ ಮಾಡಿದನು. ಐಹಿಕ ಸುಖಗಳಿಂದ ಮತ್ತು ದಾಂಪತ್ಯ ಜೀವನದಿಂದ ವಿಮುಖರಾಗಿ 41 ದಿನಗಳ ವ್ರತಾಚರಣೆ ಮಾಡಿ ದರ್ಶನಕ್ಕೆ ಬರುವವರಿಗೆ ಮಾತ್ರ ತನ್ನ ಅನುಗ್ರಹವಾಗುವುದೆಂದು ಮಣಿಕಂಠನು ಮೊದಲೇ ಪ್ರಸ್ತಾವಿಸಿದ್ದನು. ರಾಜಶೇಖರ ರಾಜನು ನಿರ್ದಿಷ್ಟ ಸಮಯದೊಳಗೆ ದೇವಾಲಯದ ನಿರ್ಮಾಣ ಕಾರ್ಯವನ್ನು ನೆರವೇರಿಸಿದನು. ಕ್ಷೇತ್ರ ಸಮುಚ್ಚಯದತ್ತ ಹೋಗಲಿರುವ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಿಸಿದನು. ಪಂಪಾ ನದಿಯು ಪವಿತ್ರವಾದ ಗಂಗಾನದಿಯಂತೆ, ಶಬರಿಮಲೆ ಪಾವನವಾದ ಕಾಶಿ ಕ್ಷೇತ್ರದಂತೆ ಎಂಬ ಭಗವಂತನ ಮಾತುಗಳನ್ನು ನೆನಪಿಸಿಕೊಂಡು ದೇವರ ದರ್ಶನ ಪುಣ್ಯಕ್ಕಾಗಿ ಧರ್ಮಶಾಸ್ತಾವಿನ ವಿಗ್ರಹವನ್ನು ಪ್ರತಿಷ್ಠಾಪಿಸುವ ಶ್ರಮಸಾಧ್ಯವಾದ ಕಾರ್ಯದಲ್ಲಿ ತೊಡಗಿಸಿಕೊಂಡನು. ಸಮುದ್ರದಿಂದ ಕೇರಳವನ್ನು ಮರಳಿ ಪಡೆದ ಪರಶುರಾಮನು ಧರ್ಮ ಶಾಸ್ತಾವಿನ ಆಜ್ಞೆಯಂತೆ ಮಕರ ಸಂಕ್ರಮಣ ದಿನದಂದು ಅಯ್ಯಪ್ಪನ ರೂಪವನ್ನು ಕೆತ್ತಿ ಶಬರಿಮಲೆಯಲ್ಲಿ ಪ್ರತಿಷ್ಠಾಪಿಸಿದನು. ಉತ್ತಮಿಕೆಯ ಬೆಳಕನ್ನು ಬೀರುವ ಹಾಗೂ ಬ್ರಹ್ಮಚಾರಿಯ ಜೀವನಕ್ಕೆ ಸಮಾನವಾದ ಜೀವನವನ್ನು ನಡೆಸುವವರನ್ನು ಅಯ್ಯಪ್ಪರು ಎಂದು ಕೆಯುತ್ತಾರೆ. ಹುಲಿಯ ಹಾಲನ್ನು ಸಂಗ್ರಹಿಸಲು ಭಗವಂತನು ಹೋದುದನ್ನು ನೆನಪಿಸುವ ರೀತಿಯಲ್ಲಿ ಮಾಲೆಗಳಿಂದ ಅಲಂಕರಿಸಿ, ಮೂರು ಕಣ್ಣುಗಳಿರುವ ತೆಂಗಿನಕಾಯಿ ಮತ್ತು ಅಗತ್ಯ ಆಹಾರ ಸಾಮಗ್ರಿಗಳೊಂದಿಗೆ ಪಂಬೆಗೆ ತಲಪಿ, ಅಲ್ಲಿ ಸ್ನಾನ ಮಾಡಿ, ಶರಣ ಮಂತ್ರಗಳನ್ನು ಮೊಳಗಿಸಿ ಭಕ್ತರು ಹದಿನೆಂಟು ಮೆಟ್ಟಿಲುಗಳನ್ನು ಏರುತ್ತಾರೆ. ಧರ್ಮಶಾಸ್ತಾವಾದ ಅಯ್ಯಪ್ಪನ ಒಂದು ನೋಟವನ್ನು ಕಾಣುವುದಕ್ಕಾಗಿ ಎಲ್ಲಾ ವರ್ಷವೂ ಜಾತಿ ಮತ ಭೇದವಿಲ್ಲದೆ ಕೋಟಿ ಲೆಕ್ಕದಲ್ಲಿ ಭಕ್ತರು ಶಬರಿಮಲೆಗೆ ಬರುತ್ತಾರೆ.